ಮಂಗಳೂರು: ನಾಪತ್ತೆಯಾಗಿ ಯುವಕ 15 ವರ್ಷಗಳ ಬಳಿಕ ಮರಳಿ ಕುಟುಂಬದ ಮಡಿಲಿಗೆ ; ಮಾನಸಿಕ ಅಸ್ವಸ್ಥನಾಗಿದ್ದ ಯುವಕನಿಗೆ ಆಸರೆ ಯಾದ  ಮಂಗಳೂರಿನ ವೈಟ್ ಹೌಸ್ ಸಂಸ್ಥೆ.

ಮಂಗಳೂರು: ನಾಪತ್ತೆಯಾಗಿ ಯುವಕ 15 ವರ್ಷಗಳ ಬಳಿಕ ಮರಳಿ ಕುಟುಂಬದ ಮಡಿಲಿಗೆ ; ಮಾನಸಿಕ ಅಸ್ವಸ್ಥನಾಗಿದ್ದ ಯುವಕನಿಗೆ ಆಸರೆ ಯಾದ ಮಂಗಳೂರಿನ ವೈಟ್ ಹೌಸ್ ಸಂಸ್ಥೆ.


ಮಂಗಳೂರು, ಡಿ.11: ಅವರದ್ದು ಒಂದೂರಿಂದ ಇನ್ನೊಂದೂರಿಗೆ ತೆರಳಿ ಕೂಲಿ ಮಾಡುವ ಕುಟುಂಬ. ಹೀಗಿರುವಾಗಲೇ ದೆಹಲಿಯಲ್ಲಿದ್ದ ಯುವಕ ದಿಢೀರ್ ನಾಪತ್ತೆಯಾಗಿದ್ದ. ಮನೆಮಂದಿ, ಆತನ ತಾಯಿ ಇನ್ನಿಲ್ಲದಂತೆ ಹುಡುಕಾಡಿ ಹುಡುಗನ ಆಸೆಯನ್ನೇ ಬಿಟ್ಟಿದ್ದರು. ಆದರೆ 15 ವರ್ಷಗಳ ಬಳಿಕ ದೂರದ ಮಂಗಳೂರಿನಲ್ಲಿ ಆ ಯುವಕ ಮರಳಿ ಕುಟುಂಬದ ಮಡಿಲು ಸೇರಿದ್ದಾನೆ. ಬೀದಿಗೆ ಬಿದ್ದ ಯುವಕನಿಗೆ ಮಂಗಳೂರಿನ ವೈಟ್ ಡೌಸ್ ಸಂಸ್ಥೆ ಆಸರೆಯಾಗಿದೆ.  
ಅದು 2010ರಲ್ಲಿ  ಮಂಗಳೂರಿನ ಎಸ್ಪಿ ಕಚೇರಿ ಬಳಿ ಬೀದಿ ಅಲೆಯುತ್ತಿದ್ದ ಯುವಕ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದ. ಬಸ್ ನಿಲ್ದಾಣದಲ್ಲಿ ಮಲಗುತ್ತ ಗಡ್ಡ ಬಿಟ್ಟುಕೊಂಡು ಮಾನಸಿಕ ಅಸ್ವಸ್ಥನಂತಿದ್ದ ಯುವಕನನ್ನು ಶಕ್ತಿನಗರದ ವೈಟ್ ಡೌಸ್ ಸಂಸ್ಥೆಯ ಅನಾಥಾಶ್ರಮಕ್ಕೆ ಸೇರಿಸಲಾಗಿತ್ತು. ಒಮ್ಮೊಮ್ಮೆ ಬೊಬ್ಬೆ ಹಾಕುವುದು ಬಿಟ್ಟರೆ ಬೇರೆ ಮಾತು ಆಡುತ್ತಿರಲಿಲ್ಲ. ಹೀಗಾಗಿ ಆತನ ಹಿನ್ನೆಲೆ ಅರಿಯುವುದು ಅಲ್ಲಿನ ಸಿಬಂದಿಗೂ ಸಾಧ್ಯವಾಗಿರಲಿಲ್ಲ. 

ನಿರಂತರ ಶುಶ್ರೂಷೆ, ಔಷಧೋಪಚಾರದಿಂದ ಸ್ವಲ್ಪ ಸ್ವಸ್ಥನಾಗಿದ್ದ ಯುವಕ ತನ್ನ ಹೆಸರು ಶಿವಕುಮಾರ್, ಊರು ಛತ್ತಿಸ್‌ಗಡ ಎಂದು ಹೇಳಿದ್ದ. ಕೆಲವು ವರ್ಷ ಕಳೆಯುತ್ತಿದ್ದಂತೆ ದೈಹಿಕವಾಗಿ ಬಲನಾಗಿದ್ದ ಯುವಕ ಇತರೇ ಹಾಸಿಗೆ ಹಿಡಿದವರನ್ನು ಆರೈಕೆ ಮಾಡಲು ಶುರು ಮಾಡಿದ್ದ. ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸಗಳನ್ನೂ ಮಾಡತೊಡಗಿದ್ದ. ಇತ್ತೀಚೆಗೆ ತನ್ನಿಂದ ತಾನೇ ಹಳೆಯ ನೆನಪನ್ನು ಮಾಡಿಕೊಂಡ ಶಿವಕುಮಾರ್ ತನ್ನ ಕುಟುಂಬಸ್ಥರ ಹೆಸರು, ಊರು ಹೇಳತೊಡಗಿದ್ದ. ಅಷ್ಟಾಗುತ್ತಲೇ ಸಂಸ್ಥೆಯ ನಿರ್ವಾಹಕಿ ಕೊರಿನಾ ರಸ್ಕಿನ್, ಆತನ ಹಿನ್ನೆಲೆ ಅರಿಯಲು ಮುಂದಾಗಿದ್ದರು. ಆತನ ಊರಿನ ಪೊಲೀಸ್ ಠಾಣೆ ಸಂಪರ್ಕಿಸಿ ಮನೆಯವರನ್ನು ಪತ್ತೆ ಮಾಡಿದ್ದರು.  

ವೈಟ್‌ಡೌಸ್ ಸಂಸ್ಥೆಯವರಿಂದ ಶಿವಕುಮಾರ್ ಬಗ್ಗೆ ಮಾಹಿತಿ ಪಡೆದ ಕುಟುಂಬಸ್ಥರು ದೂರದ ಛತ್ತೀಸ್ಗಢದಿಂದ ಮಂಗಳೂರಿಗೆ ಆಗಮಿಸಿದ್ದಾರೆ. 15 ವರ್ಷಗಳ ಹಿಂದೆ ಕೈತಪ್ಪಿ ಹೋಗಿದ್ದ ಯುವಕ ಮಂಗಳೂರಿನಲ್ಲಿ ಇದ್ದಾನೆಂದು ಹೇಳಿದಾಗ, ಅವರಿಗೂ ನಂಬಿಕೆ ಬಂದಿರಲಿಲ್ಲ. ದೂರದ ಮನೆಯವರು ಬರುತ್ತಿದ್ದಂತೆ ಶಿವಕುಮಾರ್ ಭಾವುಕನಾಗಿದ್ದಾನೆ. ಇವರದು ಕೂಲಿ ಮಾಡುವ ಕುಟುಂಬವಾಗಿದ್ದು, ಸಣ್ಣಂದಿನಿಂದಲೂ ಶಿವಕುಮಾರ್ ಮಾನಸಿಕವಾಗಿ ದುರ್ಬಲನಾಗಿದ್ದ. ಹೀಗಾಗಿ ಬೇಗನೆ ಮದುವೆಯನ್ನೂ ಮಾಡಲಾಗಿತ್ತು. ಆದರೆ ಪತ್ನಿ ಒಂದೇ ತಿಂಗಳಲ್ಲಿ ಈತನನ್ನು ಬಿಟ್ಟು ಹೋಗಿದ್ದಳು. ಆನಂತರ, ತಾಯಿ ಜೊತೆಗೆ ಕೆಲಸಕ್ಕಾಗಿ ದೆಹಲಿಗೆ ತೆರಳಿದ್ದ. ಕಟ್ಟಡ ಕೆಲಸ ಮಾಡುತ್ತಿದ್ದಾಗಲೇ ತಾಯಿ ಬಿದ್ದು ಗಾಯಗೊಂಡಿದ್ದರಿಂದ ಅವರ ಕುಟುಂಬ ಛತ್ತೀಸ್ಗಢದ ಊರಿಗೆ ಮರಳಿತ್ತು. 

ಶಿವಕುಮಾರ್ ಮಾತ್ರ ತಾನಿಲ್ಲಿ ಕೆಲಸ ಮುಂದುವರಿಸುತ್ತೇನೆಂದು ಹೇಳಿ ದೆಹಲಿಯಲ್ಲೇ ಉಳಿದುಕೊಂಡಿದ್ದ. ಆದರೆ ಕೆಲವೇ ತಿಂಗಳಲ್ಲಿ ದೆಹಲಿ ಬಿಟ್ಟು ಊರಿಂದ ಊರಿಗೆ ರೈಲಿನಲ್ಲಿ ಅಲೆದಾಡಿದ್ದು ಕೊನೆಗೆ ಮಂಗಳೂರಿಗೆ ತಲುಪಿದ್ದ. ಆದರೆ ಹೊಸ ಊರು, ಮಾನಸಿಕ ಅಸ್ವಸ್ಥತೆಯ ಕಾರಣದಿಂದ ದಿಕ್ಕೆಟ್ಟು ಹೋಗಿದ್ದ.

ಅದೃಷ್ಟವಶಾತ್ ಶಿವಕುಮಾರ್ ಅಷ್ಟರಲ್ಲೇ ಮಂಗಳೂರಿನ ವೈಟ್‌ಡೌಸ್ ಸಂಸ್ಥೆಯ ಆಸರೆ ಸಿಕ್ಕಿದ್ದರಿಂದ ಜೀವ ಉಳಿಸಿಕೊಂಡಿದ್ದಾನೆ. 15 ವರ್ಷಗಳ ಬಳಿಕ ಅದೇ ಸಂಸ್ಥೆಯೀಗ ಆತನಿಗೆ ಮನೆಯ ದಾರಿಯನ್ನೂ ತೋರಿಸಿದೆ. ಬಾರದ ಊರಿಗೆ ಹೋಗಿದ್ದಾನೆ ಅಂದುಕೊಂಡಿದ್ದ ಮನೆಯವರು ಸಂತಸ ಮತ್ತು ಅದಕ್ಕಿಂತ ಅಚ್ಚರಿಗೆ ಒಳಗಾಗಿದ್ದಾರೆ. ಶಿವಕುಮಾರ್ ಸಂಬಂಧಿಕ ದುವಾಸಿನ್ ಭಾರದ್ವಜ್, ಇವ ಮರಳಿ ಬರುತ್ತಾನೆಂದು ನಾವು ಊಹಿಸಿಯೇ ಇರಲಿಲ್ಲ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article