ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಕೇಸ್ನ ಎ1 ಆಗಿರುವ ನಟಿ ಪವಿತ್ರಾ ಗೌಡಗೆ ಕೊನೆಗೂ ಬಿಡುಗಡೆ ಭಾಗ್ಯ!!. ಬೇಲ್ ಪಡೆದು ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಬಂದ ಕೂಡಲೇ ದರ್ಶನ್ ಹೆಸರಲ್ಲಿ ಪೂಜೆ ಅರ್ಚನೆ.
Tuesday, December 17, 2024
ಬೆಂಗಳೂರು, ಡಿ 17: ರೇಣುಕಾಸ್ವಾಮಿ ಕೊಲೆ ಕೇಸ್ನ ಎ1 ಆಗಿರುವ ನಟಿ ಪವಿತ್ರಾ ಗೌಡಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಬೇಲ್ ಪಡೆದು ಹೊರ ಬರುವ ದಿನಕ್ಕಾಗಿ ಕಾಯ್ತಿದ್ದ ಪವಿತ್ರಾ ಕೊನೆಗೂ ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಬಂದಿದ್ದಾರೆ. ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡಗೆ ಹೈಕೋರ್ಟ್ ಡಿಸೆಂಬರ್ 13 ರಂದೇ ಬೇಲ್ ಮಂಜೂರು ಮಾಡಿತ್ತು. ಈ ಹಿನ್ನೆಲೆ ಇಂದು ಪವಿತ್ರಾ ಗೌಡ ಬೆಂಗಳೂರಿನ ಸೆಂಟ್ರಲ್ ಜೈಲಿಂದ ಬಿಡುಗಡೆ ಆಗಿದ್ದಾರೆ.
ಪರಪ್ಪನ ಅಗ್ರಹಾರದಿಂದ ಪವಿತ್ರಾ ಗೌಡ ಬಿಡುಗಡೆ ;
ನಟಿ ಹಾಗೂ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಆತನ ಕೊಲೆಯಾಗಿದೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಒಂದು ಮೆಸೇಜ್ನಿಂದ ಶುರುವಾದ ಈ ಕಥೆ ಸ್ಟಾರ್ ನಟ ದರ್ಶನ್ಗೆ ಜೈಲಿನ ದರ್ಶನ ಮಾಡಿಸಿತು. ಪವಿತ್ರಾಗೆ ಜೈಲಿನಲ್ಲೇ ನರಕ ದರ್ಶನ ಮಾಡಿಸಿತು. ಸ್ವಾಮಿ ಕೊಲೆಯಲ್ಲಿ ಎ1 ಹಾಗೂ ಎ2 ಆಗಿದ್ದ ಪವಿತ್ರಾ, ದರ್ಶನ್ ಇಬ್ಬರಿಗೂ ಜಾಮೀನು ಸಿಕ್ಕಿದೆ. ಇದೀಗ ಪವಿತ್ರಾ ಜೈಲಿಂದ ಹೊರಗೆ ಬಂದಿದ್ದಾರೆ.
6 ತಿಂಗಳ ಬಳಿಕ ಹೊರಗೆ ಬಂದ ಪವಿತ್ರಾ;
2024ರ ಜೂನ್ 7ರಂದು ರೇಣುಕಾಸ್ವಾಮಿ ಕೊಲೆಯಾಗಿತ್ತು. ಕೊಲೆಯಾದ ಮೂರು ದಿನದಲ್ಲಿ ಒಂದೊಂದೆ ಸತ್ಯ ಬಯಲಾಯ್ತು. ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಬಂಧನವಾಯ್ತು. ಪೊಲೀಸ್ ಕಸ್ಟಡಿ ಅಂತ್ಯಗೊಂಡ ಬಳಿಕ ಇಬ್ಬರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. 6 ತಿಂಗಳಿಂದ ಪರಪ್ಪನ ಅಗ್ರಹಾರದಲ್ಲಿದ್ದ ಪವಿತ್ರಾಗೆ ಇದೀಗ ಹೊರಗೆ ಬರುವ ಭಾಗ್ಯ ಸಿಕ್ಕಿದೆ.
ಹಲವು ತಿಂಗಳಿಂದ ಬೇಲ್ ಪಡೆದು ಜೈಲಿಂದ ಹೊರಗೆ ಬರುವ ದಿನವನ್ನು ಪವಿತ್ರಾ ಗೌಡ ಎದುರು ನೋಡ್ತಿದ್ರು. ಆದ್ರೆ ನಟಿಗೆ ಜಾಮೀನು ದೂರದ ಬೆಟ್ಟವಾಗಿ ಹೋಗಿತ್ತು. ಎ1 ಆಗಿದ್ದ ಕಾರಣಕ್ಕೆ ಪವಿತ್ರಾಗೆ ಜಾಮೀನು ಸಿಕ್ಕಿರಲಿಲ್ಲ. ಕೇಸ್ನಲ್ಲಿ ಪವಿತ್ರಾ ಪಾತ್ರವಿಲ್ಲ, ಆಕೆ ಸಿಂಗಲ್ ಪೇರೆಂಟ್, ಪವಿತ್ರಾಗೆ ಅಪ್ರಾಪ್ತ ಮಗಳಿದ್ದಾಳೆ ಎಂದು ವಕೀಲರು ಮಾಡಿದ ವಾದವೇ ಪವಿತ್ರಾಗೆ ಜಾಮೀನು ಸಿಗಲು ಕಾರಣವಾಯ್ತು ಎಂದು ಹೇಳಲಾಗ್ತಿದೆ.
ಜಾಮೀನು ಸಿಕ್ಕಿ ಮೂರು ದಿನವಾದ್ರೂ ಪವಿತ್ರಾ ಗೌಡಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಡಿಸೆಂಬರ್ 13ರ ಶುಕ್ರವಾರ ಪವಿತ್ರಾಗೆ ಜಾಮೀನು ಮಂಜೂರಾಯ್ತು. ಶನಿವಾರ, ಭಾನುವಾರ ರಜೆ ಇದ್ದ ಹಿನ್ನೆಲೆ ಜಾಮೀನು ಪ್ರಕ್ರಿಯೆ ಡಿಸೆಂಬರ್ 16ರಂದು ನಡೆಯಿತು. ಆದ್ರೆ ನಟಿ ಪವಿತ್ರಾ ಗೌಡ ಜಾಮೀನು ಪ್ರತಿ ತಡವಾಗಿ ಜೈಲು ಅಧಿಕಾರಿಗಳ ಕೈ ಸೇರಿದ ಹಿನ್ನೆಲೆ ನಿನ್ನೆ ಕೂಡ ಪವಿತ್ರಾಗೆ ನಿರಾಸೆಯಾಗಿತ್ತು. ಇಂದು ಜೈಲಿಂದ ಹೊರಗೆ ಬಂದಿದ್ದಾರೆ.
ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ಮಗಳನ್ನು ನೋಡಲು ಪ್ರತಿ ವಾರ ಜೈಲಿಗೆ ಬರ್ತಿದ್ದ ಪವಿತ್ರಾ ಗೌಡ ತಾಯಿ ಇಂದು ತುಂಬಾ ಖುಷಿಯಲ್ಲಿದ್ರು. ಮಗಳನ್ನು ಮನೆಗೆ ಕರೆದುಕೊಂಡು ಹೋಗಲಿ ಬೆಳಗ್ಗೆಯೇ ಜೈಲಿನ ಬಳಿ ಕಾದು ನಿಂತಿದ್ರು. ಮಗಳು ಹೊರಗೆ ಬರ್ತಿದ್ದಂತೆ ಖುಷಿಯಲ್ಲಿ ಮಗಳನ್ನು ತಬ್ಬಿಕೊಂಡಿದ್ದಾರೆ. ಪರಪ್ಪನ ಅಗ್ರಹಾರದ ಬಳಿ ಇರುವ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ಪವಿತ್ರಾ ತಾಯಿ ಮಗಳ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ನಿಂಬೆಹಣ್ಣಿನ ಹಾರ ಹಾಕಿ ಪೂಜೆ ಮಾಡಿದ್ದಾರೆ. ಇನ್ನು ದರ್ಶನ್ ಹೆಸ್ರಲ್ಲಿ ಪವಿತ್ರಾ ತಾಯಿ ಅರ್ಚನೆ ಮಾಡಿಸಿದ್ದಾರೆ. ಪೂಜೆ ಸಲ್ಲಿಸುವ ವೇಳೆ ಪವಿತ್ರಾರ ಸನ್ನೆ ಬಳಿಕ ದರ್ಶನ್ ಹೆಸರಲ್ಲಿ ತಾಯಿ ಭಾಗ್ಯ ಅರ್ಚನೆ ಮಾಡಿಸಿದ್ದಾರೆ. ಈ ವೇಳೆ, ದೇಗುಲದಲ್ಲಿ ನಟಿ ಕಣ್ಣೀರಿಟ್ಟಿದ್ದಾರೆ.