ಮಂಗಳೂರು: ಕುಲಶೇಖರ ಪರಿಸರದಲ್ಲಿ ರಾತ್ರಿ ಕಳ್ಳತನ ತಡೆಗಟ್ಟಲು ಸ್ಥಳೀಯರೇ ರಚಿಸಿಕೊಂಡ ರಾತ್ರಿ ಕಾವಲು ತಂಡ
Wednesday, October 9, 2024
ಮಂಗಳೂರು: ಕುಲಶೇಖರ ಪರಿಸರದಲ್ಲಿ ಕಳ್ಳರ ಹಾವಳಿ ವಿಪರೀತವಾಗಿ ಜನ ನಿದ್ದೆಗೆಡುವ ಪರಿಸ್ಥಿತಿ ನಿರ್ಮಾಣವಾದಾಗ ಸ್ಥಳೀಯರೇ ತಂಡ ಕಟ್ಟಿಕೊಂಡು ತಮ್ಮ ಊರಿನ ರಕ್ಷಣೆಗೆ ರಾತ್ರಿ ಕಾವಲು ನಿಂತು ಕಳ್ಳರ ಬೆನ್ನು ಹತ್ತುವ ವಿಶೇಷ ಪ್ರಯತ್ನ ನಡೆಸಿದ್ದಾರೆ.
ಕುಲಶೇಖರ ಶಕ್ತಿನಗರ ರಸ್ತೆಯ ಕ್ಯಾಸ್ತಲಿನೋ ಕಾಲನಿ, ಪಿಂಟೊ ಕಾಲನಿ, ಕಕ್ಕೆಬೆಟ್ಟು, ಕೊಂಗೂರು ರಸ್ತೆ ಸಹಿತ ಸುತ್ತಮುತ್ತಲಿನಲ್ಲಿ ಎರಡು ತಿಂಗಳ ಹಿಂದೆ ಕಳ್ಳರ ಕರಾಮತ್ತು ಜೋರಾಗಿತ್ತು. ಇಲ್ಲಿ 300ಕ್ಕೂ ಅಧಿಕ ಮನೆ ಇದೆ. ರಾತ್ರಿಯಾದರೆ ಕಳ್ಳರು ಹೊಂಚು ಹಾಕುವುದು, ಮೊಬೈಲ್ ಕದಿಯುವುದು ಸಾಮಾನ್ಯವಾಗಿತ್ತು. ಇದರಿಂದ ಬೇಸತ್ತ ಸ್ಥಳೀಯರು ಪ್ರತ್ಯೇಕ ತಂಡ ರಚಿಸಿ ರಾತ್ರಿ ಕಾವಲಿಗೆ ಮುಂದಾದರು. ಈ ಕಾವಲಿನ ಉಸ್ತುವಾರಿಯನ್ನು ಹೋರಾಟಗಾರ್ತಿ ಮೀನಾ ಟೆಲ್ಲಿಸ್ ವಹಿಸಿದ್ದರು.
ಸಾಮಾಜಿಕ, ರಾಜಕೀಯವಾಗಿ ತೊಡಗಿಸಿಕೊಂಡಿರುವ ಮೀನಾ ಟೆಲ್ಲಿಸ್ ನೇತೃತ್ವದಲ್ಲಿ ಈ ತಂಡ ಒಂದೆರಡು ತಿಂಗಳ ಹಿಂದೆ ರಾತ್ರಿ ಪಹರೆ ನಡೆಸುವ ಮೂಲಕ ಕಳ್ಳರ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿದೆ. ವಿಶಾಲ್, ನವಾಜ್, ಫರಾಜ್, ಹರ್ಷದ್, ತನ್ನು, ಪ್ರಿತೇಶ್, ಐವನ್, ಡೆನ್ವರ್, ವಿನೋದ್, ಫೆಲಿಕ್ಸ್ ಸಹಿತ ಇತರರು ಟೀಮ್‌ನಲ್ಲಿದ್ದರು. ಇವರ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಮಾಡಲಾಗಿತ್ತು. ಆ ವ್ಯಾಪ್ತಿಯ ಬೀಟ್ ಪೊಲೀಸರು ಕೂಡ ಆ ಗ್ರೂಪ್‌ನಲ್ಲಿದ್ದರು.
ಈ ತಂಡದ ಸದಸ್ಯರು ರಾತ್ರಿ ಸಮಯದಲ್ಲಿ ಪ್ರತ್ಯೇಕವಾಗಿ ವಿವಿಧ ಕಡೆಗಳಲ್ಲಿ ನಿಂತು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸುತ್ತಿದ್ದರು. ಒಂದು ತಿಂಗಳ ಕಾಲ ರಾತ್ರಿ 9ರಿಂದ ಮುಂಜಾನೆ 4ರವರೆಗೆ ಕಾವಲು ನಿಂತಿದ್ದರು. ಈ ವ್ಯಾಪ್ತಿಯ ಯಾವುದೇ ಜಾಗದಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ, ಶಂಕಾಸ್ಪದ ಘಟನೆಗಳು ಆದರೆ ತತ್‌ಕ್ಷಣವೇ ಮೀನಾ ಟೆಲ್ಲಿಸ್ ನೇತೃತ್ವದ ಟೀಮ್‌ಗೆ ಈ ಮಾಹಿತಿ ಲಭ್ಯವಾಗುತ್ತದೆ. ಆಗ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಹೋಗುತ್ತದೆ. ಸದಸ್ಯರು ಆಲರ್ಟ್ ಆಗಿ ಎಲ್ಲರೂ ಜತೆಗೂಡಿ ಪೊಲೀಸರಿಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ವಹಿಸುತ್ತಿದ್ದರು.
ಕುಲಶೇಖರ ಕ್ಯಾಸ್ತಲಿನೊ ಪರಿಸರದಲ್ಲಿ ಕಳ್ಳರ ಹಾವಳಿ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಸ್ಥಳೀಯರ ತಂಡ ರಾತ್ರಿ ತಂಡವಾಗಿ ಊರಲ್ಲಿ ಕಾವಲು ನಿಲ್ಲುತ್ತಿದ್ದರು. ಪೊಲೀಸರಿಗೆ ಪೂರ್ಣ ಮಾಹಿತಿ ನೀಡುತ್ತಿದ್ದರು. ಬಳಿಕ ಬೀಟ್ ಪೊಲೀಸರನ್ನು ಅಲ್ಲಿಗೆ ಹೆಚ್ಚುವರಿ ನಿಯೋಜಿಸಲಾಗಿದೆ ಎಂದು
ಕಂಕನಾಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ತಿಳಿಸಿದರು.