ತೀರ್ಥಹಳ್ಳಿ ತಹಸೀಲ್ದಾರ್ ಶವ ಬೆಂಗಳೂರಿನ ಲಾಡ್ಜ್‌ನಲ್ಲಿ ಪತ್ತೆ, ಸಾವಿಗೇನು ಕಾರಣ?

ತೀರ್ಥಹಳ್ಳಿ ತಹಸೀಲ್ದಾರ್ ಶವ ಬೆಂಗಳೂರಿನ ಲಾಡ್ಜ್‌ನಲ್ಲಿ ಪತ್ತೆ, ಸಾವಿಗೇನು ಕಾರಣ?

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಹಸೀಲ್ದಾರ್ ಜಿ.ಬಿ. ಜಕ್ಕನಗೌಡರ್ (54) ಅವರ ಮೃತದೇಹವು ನಗರದ ಲಾಡ್ಜ್‌ವೊಂದರ ಕೊಠಡಿಯಲ್ಲಿ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವೈಭವ್ ಲಾಡ್ಜ್‌ನ ಕೊಠಡಿಯಲ್ಲಿ ಬುಧವಾರ ರಾತ್ರಿ ಜಕ್ಕನಗೌಡರ್ ‌ಮೃತದೇಹ ಪತ್ತೆಯಾಗಿದೆ.

ಜಕ್ಕನಗೌಡರ್ ಮೂಲತಃ ಗದಗ ಜಿಲ್ಲೆಯವರಾಗಿದ್ದು, ಕಳೆದೊಂದು ವರ್ಷದಿಂದ ತೀರ್ಥಹಳ್ಳಿ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕೋರ್ಟ್ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ವೈಭವ್ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ಸಂಜೆಯಿಂದಲೇ ಯಾರ ಸಂಪರ್ಕಕ್ಕೂ ಅವರು ಸಿಕ್ಕಿರಲಿಲ್ಲ.

ನಂತರ ಮೊಬೈಲ್ ಲೊಕೇಶನ್ ಪರಿಶೀಲನೆ ನಡೆಸಿದಾಗ ಮೆಜೆಸ್ಟಿಕ್ ಸಮೀಪ ತೋರಿಸುತ್ತಿತ್ತು.‌ ಅದನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ವೈಭವ್ ಲಾಡ್ಜ್ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಠಡಿ ಬಾಗಿಲು ಹಾಕಿತ್ತು. ಪೊಲೀಸರು ಬಾಗಿಲು ತೆರೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ಕಾರಣ ತಿಳಿಯಲಿದೆ.

ಈ ಮಧ್ಯೆ, ಜಕ್ಕನಗೌಡರ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ‘ಜಕ್ಕನಗೌಡರ್ ಯಾವ ವಸತಿ ಗೃಹದಲ್ಲಿ ತಂಗಿದ್ದರು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಅವರ ಕುಟುಂಬದವರು ಸಂಪರ್ಕಕ್ಕೆ ಸಿಕ್ಕಿಲ್ಲ. ಶವ ಪರೀಕ್ಷೆಯ ನಂತರ ಅವರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಗುರುವಾರ ಶವ ಪರೀಕ್ಷೆಯ ನಂತರ ಕುಟುಂಬದವರು ಪಾರ್ಥಿವ ಶರೀರವನ್ನು ಗದಗಿಗೆ ಕೊಂಡೊಯ್ಯಲಿದ್ದಾರೆ’ ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article