ಮಂಗಳೂರು:ನಸುಕಿನಲ್ಲಿ ಮಂಗಳೂರು ಜೈಲಿಗೆ ದಿಢೀರ್ ಪೊಲೀಸ್ ದಾಳಿ ; 25 ಮೊಬೈಲ್, ಬ್ಲುಟೂತ್, ಪೆನ್ ಡ್ರೈವ್, ಗಾಂಜಾ, ಡ್ರಗ್ಸ್ ವಶಕ್ಕೆ, ಜೈಲಲ್ಲಿದ್ದೇ ಕೈದಿಗಳ ಅಕ್ರಮ ಚಟುವಟಿಕೆ ಪತ್ತೆ
Wednesday, July 24, 2024
ಮಂಗಳೂರು:ನಗರದ ಕೊಡಿಯಾಲಬೈಲಿನ ಮಂಗಳೂರು ಸಬ್ ಜೈಲಿಗೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು ಕೈದಿಗಳು ಬಳಸುತ್ತಿದ್ದ ಮೊಬೈಲ್ ಫೋನ್, ಸಿಗರೇಟ್ ಪ್ಯಾಕ್, ಚಾರ್ಜರ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ನಸುಕಿನಲ್ಲಿ ನಾಲ್ಕು ಗಂಟೆ ವೇಳೆಗೆ ಇಬ್ಬರು ಡಿಸಿಪಿ, ಮೂರು ಎಸಿಪಿ, 15 ಇನ್ಸ್ ಪೆಕ್ಟರ್ ಸೇರಿ ಒಟ್ಟು 150 ಪೊಲೀಸ್ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜೈಲಿನ ವಿವಿಧ ಸೆಲ್ ಗಳನ್ನು ತಪಾಸಣೆ ನಡೆಸುವುದಕ್ಕಾಗಿ ಬೇರೆ ಬೇರೆ ತಂಡಗಳನ್ನು ರಚಿಸಲಾಗಿತ್ತು.
ದಾಳಿ ಸಂದರ್ಭದಲ್ಲಿ 25 ಮೊಬೈಲ್ ಫೋನ್, ಒಂದು ಬ್ಲುಟೂತ್ ಉಪಕರಣ, ಐದು ಇಯರ್ ಫೋನ್, ಒಂದು ಪೆನ್ ಡ್ರೈವ್, ಐದು ಮೊಬೈಲ್ ಚಾರ್ಜರ್, ಸಿಗರೇಟ್ ಪ್ಯಾಕ್, ಮೂರು ಕೇಬಲ್, ಸ್ವಲ್ಪ ಪ್ರಮಾಣದಲ್ಲಿ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ. ಜೈಲಿನ ಒಳಗಿದ್ದುಕೊಂಡೇ ಕೈದಿಗಳು ಹಫ್ತಾ ವಸೂಲಿ, ಹಣಕ್ಕಾಗಿ ಡಿಮ್ಯಾಂಡ್ ಇಡುವುದು, ಬೆದರಿಕೆ ಹಾಕುವಂತಹ ಕೃತ್ಯ ನಡೆಸುತ್ತಾರೆ. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ್ದಾರೆ.