ಕೇರಳ:2018-19ರ ಬಳಿಕ ಮತ್ತೊಮ್ಮೆ ಮಹಾಮಳೆ. ವಯನಾಡ್, ಮಲಪ್ಪುರಂ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ.

ಕೇರಳ:2018-19ರ ಬಳಿಕ ಮತ್ತೊಮ್ಮೆ ಮಹಾಮಳೆ. ವಯನಾಡ್, ಮಲಪ್ಪುರಂ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ.

ಕೇರಳ: ಮಹಾಮಳೆಗೆ ಮತ್ತೆ ಜಲಪ್ರಳಯ ; ವಯನಾಡ್, ಮಲ್ಲಪ್ಪುರಂ ಜಿಲ್ಲೆಯಲ್ಲಿ ಭಾರೀ ಭೂಕುಸಿತ, 30ಕ್ಕೂ ಹೆಚ್ಚು ಸಾವು, ನೂರಾರು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ, ಇಡೀ ಗ್ರಾಮಗಳೇ ನಾಮಾವಶೇಷ, ಮುಂಡಕೈ, ಮೇಪ್ಪಾಡಿ ಸ್ಥಿತಿ ಭೀಕರ !

ತಿರುವನಂತಪುರಂ: 2018-19ರ ಬಳಿಕ ಮತ್ತೊಮ್ಮೆ ಕೇರಳ ಮಹಾಮಳೆಗೆ ನಲುಗಿದ್ದು, ವಯನಾಡ್, ಮಲಪ್ಪುರಂ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಇಡೀ ಗ್ರಾಮ ಗ್ರಾಮಗಳೇ ಮಣ್ಣಿನಲ್ಲಿ ಹೂತು ಹೋಗಿದ್ದು, ನೂರಾರು ಮಂದಿ ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ನಸುಕಿನಲ್ಲಿ ಘಟನೆ ನಡೆದಿದ್ದು, ಬೆಳಗ್ಗೆ 10 ಗಂಟೆ ವರೆಗಿನ ಮಾಹಿತಿ ಪ್ರಕಾರ 30ಕ್ಕೂ ಹೆಟ್ಟು ಶವಗಳನ್ನು ಮೇಲೆತ್ತಲಾಗಿದೆ.

ವಯನಾಡ್ ಜಿಲ್ಲೆಯ ಮೇಪ್ಪಾಡಿ, ಮುಂಡಕೈ, ಚೂರಮಾಲ ಗ್ರಾಮದಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದ್ದು, ಘಟ್ಟದ ತಪ್ಪಲಿನಲ್ಲಿದ್ದ ಮನೆಗಳು ಪೂರ್ತಿ ನಾಮಾವಶೇಷವಾಗಿವೆ. ಮಲಪ್ಪುರಂ ಜಿಲ್ಲೆಯ ನಿಲಂಬೂರು ಪ್ರದೇಶದಲ್ಲಿ ಚಾಲಿಯಾರ್ ಹೊಳೆಯಲ್ಲಿ ಮಹಾ ಪ್ರವಾಹ ಉಂಟಾಗಿದ್ದು, ಆಸುಪಾಸಿನಲ್ಲಿ ಭೂಕುಸಿತಗಳಾಗಿವೆ. ಹಲವಾರು ಮನೆಗಳು, ಅಂಗಡಿಗಳು, ಅಲ್ಲಿದ್ದ ವಾಹನಗಳು ಮಣ್ಣಿನಡಿ ಬಿದ್ದಿವೆ. ಜನರು ಮಲಗಿದಲ್ಲೇ ಸಮಾಧಿಯಾಗಿದ್ದಾರೆ. ಎಷ್ಟು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ, ಯಾರೆಲ್ಲ ಇದ್ದರು ಎನ್ನುವುದು ಗೊತ್ತಾಗಿಲ್ಲ. ಅಲ್ಲಿದ್ದ ಸೇತುವೆಯೂ ನೀರುಪಾಲಾಗಿದ್ದು, ಬದುಕುಳಿದ ಜನರನ್ನು ರಕ್ಷಣೆ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಪೊಲೀಸರು, ಅಗ್ನಿಶಾಮಕ ದಳ, ಎನ್ ಡಿಆರ್ ಎಫ್ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಿಎಂ ಪಿಣರಾಯಿ ವಿಜಯನ್ ರಕ್ಷಣೆಗೆ ಕೇಂದ್ರದಿಂದ ಸೇನಾ ನೆರವು ಯಾಚಿಸಿದ್ದು, ತುರ್ತು ಹೆಲಿಕಾಪ್ಟರ್ ಮೂಲಕ ರಕ್ಷಣೆಗೆ ಸೂಚನೆ ನೀಡಿದ್ದಾರೆ. ಪ್ರಧಾನಿ ಮೋದಿ ರಕ್ಷಣೆಗೆ ಮಿಲಿಟರಿ ಬಳಸುವಂತೆ ಸೂಚಿಸಿದ್ದಾರೆ. ವಯನಾಡ್ ಜಿಲ್ಲೆಯ ಚೂರಮಾಲ, ಮುಂಡಕೈ, ಅಟ್ಟಮಾಲ, ನೂಲ್ ಪುಝ ಪ್ರದೇಶಗಳಲ್ಲಿ ತೀವ್ರ ಭೂಕುಸಿತ ಉಂಟಾಗಿದೆ. ಚೂರಮಾಲ ಗ್ರಾಮದ ಶಾಲೆಯೊಂದರಲ್ಲಿ ಸಂತ್ರಸ್ತ ಜನರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಆ ಭಾಗದಲ್ಲಿಯೂ ಭಾರೀ ಕುಸಿತ ಉಂಟಾಗಿದ್ದು, ಗ್ರಾಮದಲ್ಲಿದ್ದವರೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.  

ಮಲಪ್ಪುರಂ, ಕೋಜಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ರೆಡ್ ಅಲರ್ಟ್ ನೀಡಲಾಗಿತ್ತು. ಮುಂಡಕೈ ರೆಸಾರ್ಟ್ ಬಳಿಯಲ್ಲಿ ರಾತ್ರಿ 2.30ರ ಸುಮಾರಿಗೆ ಮೊದಲು ಭೂಕುಸಿತ ಸಂಭವಿಸಿದ್ದು, ಅಲ್ಲಿ ಸುಮಾರು 40ರಷ್ಟು ಕಟ್ಟಡಗಳು ಕುಸಿದು ಹೋಗಿವೆ. ಈ ಭಾಗದಲ್ಲಿ ಭಾರೀ ಮಳೆಯಿಂದಾಗಿ ಗ್ರಾಮದ 120 ಮಂದಿಯನ್ನು ಕಟ್ಟಡದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅದೇ ಪ್ರದೇಶದಲ್ಲಿ ಬೆಟ್ಟಗಳು ಕುಸಿದು ಹೋಗಿದ್ದು, ನೀರಿನೊಂದಿಗೆ ಕೆಸರು ಮಣ್ಣು ಗ್ರಾಮವನ್ನು ಆವರಿಸಿದೆ. ಮುಂಡಕೈ, ಮೇಪ್ಪಾಡಿ ಪ್ರದೇಶದಲ್ಲಿ ರೆಸಾರ್ಟ್ ಗಳಿದ್ದು, ಪ್ರವಾಸಿಗರು ಬಂದು ಉಳಿಯುತ್ತಿದ್ದರು. ಈಗ ಮಳೆ ಇರುವುದರಿಂದ ಪ್ರವಾಸಿಗರು ಇರಲಿಲ್ಲ ಎನ್ನಲಾಗಿದೆ

Ads on article

Advertise in articles 1

advertising articles 2

Advertise under the article