ಮಂಗಳೂರು: ಅತಿಯಾದ ಮೊಬೈಲ್ ಬಳಕೆ ಬೇಡವೆಂದು ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತು - 14ರ ಬಾಲಕ ನೇಣಿಗೆ ಶರಣು
Monday, January 30, 2023
ಮಂಗಳೂರು: ಅತಿಯಾಗಿ ಮೊಬೈಲ್ ಬಳಕೆ ಮಾಡಬೇಡವೆಂದು ಪೋಷಕರು ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತೆಂದು ಮಂಗಳೂರಿನಲ್ಲೊಬ್ಬ ಬಾಲಕ ದುಡುಕಿನ ನಿರ್ಧಾರ ತೆಗೆದುಕೊಂಡು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಪದವು ಬಿ ಗ್ರಾಮದ ಕೋಟಿಮುರದ ರೆಡ್ ಬ್ರಿಕ್ಸ್ ಅಪಾರ್ಟ್ ಮೆಂಟ್ ನಿವಾಸಿ ಜಗದೀಶ್ ಎಂಬವರ ಪುತ್ರ ಜ್ಞಾನೇಶ್ (14) ನೇಣಿಗೆ ಶರಣಾಗಿರುವ ಬಾಲಕ. ಈತ ಕುಲಶೇಖರ ಬಳಿಯ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 9ನೇ ವ್ಯಾಸಂಗ ಮಾಡುತ್ತಿದ್ದ.
ಜನವರಿ 30 ರಂದು ಈ ದುರ್ಘಟನೆ ನಡೆದಿದೆ. ಜಗದೀಶ್ ಹಾಗೂ ವಿನಯಾ ದಂಪತಿಯ ಪುತ್ರನಾದ ಜ್ಞಾನೇಶ್ ಅತಿಯಾದ ಮೊಬೈಲ್ ಗೀಳು ಹತ್ತಿಸಿಕೊಂಡಿದ್ದ. ಈ ಬಗ್ಗೆ ತಾಯಿ ವಿನಯಾ ಗದರಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಣಾಮ ಮನನೊಂದ ಬಾಲಕ ಸ್ನಾನ ಮಾಡಿ ಬರುವುದಾಗಿ ಹೇಳಿ ಕೊಠಡಿಗೆ ಹೋದವನು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ನಾನ ಮಾಡಲು ಸುಮಾರು ಹೊತ್ತಾದರೂ ಬಾರದಿದ್ದಾಗ ಬಾಲಕನ ತಂದೆ ಜಗದೀಶ್ ಬಾತ್ ರೂಮ್ ಬಳಿಯ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕನು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ತಕ್ಷಣ ಅವರು ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದ ವೇಳೆ ಬಾಲಕ ಮೃತಪಟ್ಟಿರುವುದು ಕಂಡುಬಂದಿದೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.