
ಮಂಗಳೂರು: ಜಲೀಲ್ ಹತ್ಯೆ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್ ,ಕೊಲೆಯಾದ ಜಲೀಲ್ ಗೆ ವಿವಾಹಿತ ಮಹಿಳೆಯೋರ್ವರ ಜೊತೆಗಿದ್ದ ಅಕ್ರಮ ಸಂಬಂಧ ಕೊಲೆಗೆ ಪ್ರೇರಣೆ
Monday, December 26, 2022
ಮಂಗಳೂರು: ನಗರದ ಕೃಷ್ಣಾಪುರ ನಿವಾಸಿ ಜಲೀಲ್ ಹತ್ಯೆ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿರುವ ಮಂಗಳೂರು ಪೊಲೀಸರು ಘಟನೆ ನಡೆದ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ(21), ಉಡುಪಿಯ ಹೆಜಮಾಡಿ ನಿವಾಸಿ ಸವಿನ್ ಕಾಂಚನ್ ಅಲಿಯಾಸ್ ಮುನ್ನ (24) ಹೆಜಮಾಡಿ ಉಡುಪಿ, ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಬಂಧಿತ ಆರೋಪಿಗಳು.
ಬಂಧಿತರಲ್ಲಿ ಇಬ್ಬರು ಜಲೀಲ್ ರನ್ನು ಫ್ಯಾನ್ಸಿ ಅಂಗಡಿಗೆ ನುಗ್ಗಿ ಚೂರಿಯಿಂದ ಇರಿದು ಕೊಲೆಗೈದವರು. ಮತ್ತೋರ್ವನು ಕೊಲೆ ಆರೋಪಿಗಳನ್ನು ಬೈಕ್ ನಲ್ಲಿ ಎಸ್ಕೇಪ್ ಮಾಡಿಸಲು ಸಹಕರಿಸಿದವನು. ಪೊಲೀಸ್ ತನಿಖಾ ತಂಡ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ದಸ್ತಗಿರಿ ಮಾಡಿದೆ. ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಆ ಬಳಿಕ ಮುಂದಿನ ತನಿಖೆಗೆ 14 ದಿನಗಳ ಕಾಲ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
ಈ ಮೂವರು ಆರೋಪಿಗಳನ್ನು ನಿನ್ನೆ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾಗಿರುವ ಇನ್ನೂ ಕೆಲವರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಆರೋಪಿಗಳಲ್ಲಿ ಇಬ್ಬರು ಈ ಹಿಂದೆ ವಿವಿಧ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದವರು. ಆರೋಪಿಗಳಲ್ಲಿ ಓರ್ವನು 2021ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿಯೂ ಭಾಗಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.